ಕ್ರೈಸ್ತ ಸೋದರಿಯರ ಸಂಘ

ಕನ್ಯಾದೀಕ್ಷೆಯನ್ನು ಪಡೆದು ನಿಷ್ಠಾವಂತ ಜೀವನ ನಡೆಸುತ್ತ ಲೋಕಸೇವಾನಿರತರಾಗಿರುವ ಸ್ತ್ರೀಯರ ಸಂಘ (ಸಿಸ್ಟರ್‍ಹುಡ್). ಯೇಸುಕ್ರಿಸ್ತ ಇಂಥವರಿಗಾಗಿ ಮೂರು ಮುಖ್ಯ ಜೀವನ ನಿಯಮಗಳನ್ನು ಹೇಳಿದ್ದಾನೆ. ಮೊದಲನೆಯದು ಜಿತೇಂದ್ರಿಯತ್ವ. ಸೋದರಿಯಾಗುವವಳು ಐಹಿಕ ಕಾಮನೆಗಳನ್ನು ತ್ಯಜಿಸಿದವಳಾಗಿರಬೇಕು. ಎರಡನೆಯದು ಬಡತನದ ಜೀವನ. ಸೋದರಿ ಎಂದಿಗೂ ಅಧಿಕಾರ ಮತ್ತು ಆಸ್ತಿಗೆ ಆಶೆಪಡಬಾರದು. ಇದು ವಿರಕ್ತ ಸಂನ್ಯಾಸಿ ಜೀವನದಿಂದ ಮಾತ್ರ ಸಾಧ್ಯ. ಮೂರನೆಯದು ವಿಧೇಯತೆ. ಅಂದರೆ ಸಂಘದ ಮೂಲತತ್ತ್ವಗಳಿಗೆ ಮತ್ತು ಸಂಚಾಲಕರ ಆಜ್ಞೆಗಳಿಗೆ ಎರಡು ಆಡದಂತೆ ತಲೆಬಾಗಿ ವರ್ತಿಸುವುದು. ಈ ಮೂರು ನಿಯಮಗಳನ್ನು ಎಲ್ಲ ಸೋದರಿಯರೂ ಅನುಸರಿಸಬೇಕಾಗುತ್ತದೆ. ಸೋದರಿಯರಲ್ಲಿ ಮುಖ್ಯವಾಗಿ ಎರಡು ಬಗೆಯವರನ್ನು ಕಾಣಬಹುದಾಗಿದೆ. ಒಂದು ಬಗೆಯವರು ದೀಕ್ಷೆ ಪಡೆದು ಮಠಗಳಲ್ಲಿ ಜೀವಿಸಿ ಆಧ್ಯಾತ್ಮಿಕ ಶಾಂತಿಗಾಗಿ ದುಡಿಯುತ್ತಾರೆ. ಇನ್ನೊಂದು ಬಗೆಯವರು ದೀಕ್ಷೆ ಪಡೆದು ಮಠಗಳ ಮೂಲಕ ಲೋಕಸೇವೆಯಲ್ಲಿ ನಿರತರಾಗುತ್ತಾರೆ. 	

	ಇಂಥ ಸೋದರಿ ಸಂಘಗಳು ಇರುವ ಮಠಗಳು ನೇರ ಜಗದ್ಗುರುಗಳ ಅಧಿಕಾರಕ್ಕೆ ಒಳಪಟ್ಟವಾಗಿರಬಹುದು. ಇಲ್ಲವೆ ಪ್ರಾಂತೀಯ ಧರ್ಮಾಧ್ಯಕ್ಷರ ಅಧಿಕಾರಕ್ಕೆ ಒಳಪಟ್ಟವಾಗಿರಬಹುದು. 			   			(ಎ.ಪಿಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ